Blog

ಎರಡು ದಶಕಗಳ ಹಿಂದೆ, ಡೊಮಿನಿಕನ್ ರಿಪಬ್ಲಿಕ್ ದೇಶದ ಒಂದು ಹಳ್ಳಿಯಲ್ಲಿ ಸಿಕ್ಕ 55 ವರ್ಷದ ಸ್ಪಾನಿಷ್ ರೈತ ಮಾರ್ಟಿನೆಜ್ ’ವಿಕೇಂದ್ರೀಕರಣವೇ ಸಬಲೀಕರಣ’ ಎಂಬ ದೊಡ್ಡ ಪಾಠವನ್ನು ನನಗೆ ಕಲಿಸಿದರು. ಅಸಮಾನತೆಯು ಕೇಂದ್ರೀಕರಣದ ದೊಡ್ಡ ಫಲಿತಾಂಶ ಎಂಬುದನ್ನು ನಮ್ಮ ಸುತ್ತಲೂ ನಾವು ನೋಡುತ್ತಿದ್ದೇವೆ. ಇಷ್ಟು ವರ್ಷಗಳಾದಮೇಲೂ ಈ ಮಾತು ನನ್ನ ಮನಸ್ಸಿನಲ್ಲಿ ಅಚ್ಚಾಗಿ ಉಳಿದುಹೋಗಿದೆ.

ಮೇಲ್ವರ್ಗದಿಂದ ಬಡವರ ಕೈಗೆ ಅಧಿಕಾರವನ್ನು ತಲುಪಿಸುವಲ್ಲಿ ವಿಕೇಂದ್ರೀಕೃತ ಸೇವೆಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ಸೌರಶಕ್ತಿಯ ಮೂಲಕ ದೇಶದಲ್ಲಿನ ಪರಿಸ್ಥಿತಿಯನ್ನು ಬದಲಾಯಿಸಿ ತನ್ಮೂಲಕ ಭಾರತದ ಬಡವರು ಸಮಾಜ ಪರಿವರ್ತನೆಯ ಮಹತ್ಕಾರ್ಯದಲ್ಲಿ ಸಮಾನ ಪಾಲುದಾರರಾಗಿ ಭಾಗವಹಿಸಬೇಕು ಎಂಬ ಯೋಚನೆಯೇ ಸೆಲ್ಕೋದ ಸೃಷ್ಟಿಗೆ ಕಾರಣವಾಗಿದೆ.

ಸೌರ ಪರಿಹಾರಗಳನ್ನು ಯಾವುದೇ ಸ್ಥಳಕ್ಕೆ ಸುಲಭವಾಗಿ ಸ್ಥಳಾಂತರಿಸಬಹುದು ಹಾಗೂ ಅದುವೇ ಸೌರ ಪರಿಹಾರಗಳ ವಿಶೇಷತೆ. ನೂರಾರು ಕಿಲೋಮೀಟರ್ ದೂರದಲ್ಲಿ ವಿದ್ಯುತ್ ಉತ್ಪಾದಿಸಿ ಅದನ್ನು ಸಾಗಿಸಬೇಕಾದರೆ ಉಂಟಾಗುವ ಪ್ರಸರಣ ನಷ್ಟದ ಬದಲು ವಿದ್ಯುತ್ ಅವಶ್ಯಕತೆ ಎಲ್ಲಿದೆಯೋ ಅಲ್ಲೇ ಸೌರವಿದ್ಯುತ್ತನ್ನು ಉತ್ಪಾದಿಸಬಹುದು. ಇಂತಹ ಪರಿಹಾರವು ವಿಕೇಂದ್ರೀಕೃತ ಹಾಗೂ ಸುಲಭವಾಗಿ ಒಯ್ಯುವಂಥದ್ದಾದ್ದರಿಂದ, ಬಡವರು ತಮ್ಮ ತಕ್ಷಣದ ಅವಶ್ಯಕತೆಗಳಿಗೆ ಸೌರಶಕ್ತಿಯನ್ನು ಅವಲಂಬಿಸಬಹುದು. ಕಾಲಕ್ರಮೇಣ ಅವರ ಅವಶ್ಯಕತೆಗಳು ಹೆಚ್ಚಿದಾಗ ಉತ್ಪಾದನೆಯನ್ನೂ ಹೆಚ್ಚಿಸಿ ಕೈಗೆಟುಕುವ ದರದಲ್ಲಿ ವಿದ್ಯುತ್ ಪಡೆಯಬಹುದಾಗಿದೆ.

ಉದಾಹರಣೆಗೆ, ಒಡಿಶಾದ ಕಾಲಾಹಂದಿ ಜಿಲ್ಲೆಯ ದುರ್ಗಮ ಪ್ರದೇಶಗಳ ಜನರು ಒಂದು ಸಣ್ಣ ಸರ್ಕಾರಿ ದಾಖಲೆ ಅಥವಾ ಗುರುತಿನ ಚೀಟಿಯನ್ನು ಜೆರಾಕ್ಸ್ ಮಾಡಿಸಬೇಕೆಂದರೆ ಮೈಲುಗಟ್ಟಲೆ ಪ್ರಯಾಣ ಮಾಡಬೇಕು. ಇದು ಬಡವರ ಮೇಲೆ ಅಗಾಧವಾದ ಆರ್ಥಿಕ ಪರಿಣಾಮವನ್ನು ಬೀರುತ್ತಿತ್ತು. ಬದ್ಚತ್ರಾಂಗ್ ಹಳ್ಳಿಯ ಧನೇಶ್ವರ ಮಝಿ ಅವರಿಗೆ ಈ ವಿಚಾರವನ್ನು ಮನವರಿಕೆ ಮಾಡಿಕೊಡಲಾಯಿತು. ಆಗ ಅವರು ಈ ಪರಿಸ್ಥಿತಿಯಲ್ಲಿದ್ದ ಅವಕಾಶವನ್ನು ಗಮನಿಸಿ ಸಿಂಡಿಕೇಟ್ ಬ್ಯಾಂಕಿನಿಂದ ಸಾಲವನ್ನು ಪಡೆದು ಸೌರಚಾಲಿತ ಜೆರಾಕ್ಸ್ ಮತ್ತು ಪ್ರಿಂಟರ್ ಅಳವಡಿಸಿದರು. ಮಝಿ ಅವರ ಈ ಯೋಜನೆಯ ಕಾರಣ ಪ್ರತಿಯೊಂದು ಜೆರಾಕ್ಸ್ ಗಾಗಿ ಅಲ್ಲಿನ ಗ್ರಾಮಸ್ಥರು ತೆರಬೇಕಾಗಿದ್ದ ಹಣವನ್ನು ಉಳಿಸಿ ಗ್ರಾಮಸ್ಥರಿಗೆ ಬಹಳ ಸಹಕಾರಿಯಾಗಿದೆ.

ಇದು ನಮಗೆ ತೋರಿಸುವುದೇನೆಂದರೆ ಬಡವರಿಗೆ ಉದ್ಯಮಶೀಲತೆಯ ಕೌಶಲವಿದೆ ಹಾಗೂ ಅವರಿಂದ ಸೃಷ್ಟಿಯಾಗುವ ಉದ್ಯೋಗ ಅವಕಾಶಗಳು ಜನರಲ್ಲಿ ಆರ್ಥಿಕ ಸಬಲತೆಯನ್ನು ಸಾಧಿಸಿ ಸಮಾಜದಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ತರಬಹುದು ಎಂದು. ಬಡವರ ಮನೆಯ ಬಾಗಿಲಿಗೇ ಅವಶ್ಯ ಸೇವೆಗಳನ್ನು ತಲುಪಿಸುವಂತಹ ಸೌರಚಾಲಿತ ಬ್ಲಾಕ್ ಸ್ಮಿತ್ ಬ್ಲೋವರ್, ಸೌರಚಾಲಿತ ಪೋರ್ಟಬಲ್ ಡಿಸಿ ದಂತಚಿಕಿತ್ಸಾ ಕುರ್ಚಿಗಳಂತಹ ಸೂಕ್ತ ತಂತ್ರಜ್ಞಾನದ ಅವಶ್ಯಕತೆ ಅವರಿಗಿದೆ.

ಕೊನೆಯದಾಗಿ, ಬಡವರ ಅಗತ್ಯಗಳಿಗೆ ಅನುಗುಣವಾಗಿ ಅವರ ಸಂದರ್ಭ, ಸಂಸ್ಕೃತಿ ಮತ್ತು ಸ್ಥಳಕ್ಕೆ ಸರಿಹೊಂದುವಂತಹ ಮಾಲೀಕತ್ವ ಹಾಗೂ ವಿತರಣಾ ಮಾದರಿಗಳ ಸೃಷ್ಟಿ ಅತ್ಯಾವಶ್ಯಕ. ಇಂತಹ ಸಂದರ್ಭದಲ್ಲೇ ಭಾರತದಂತಹ ರಾಷ್ಟ್ರಗಳು ನಾಯಕತ್ವದ ಪಾತ್ರವನ್ನು ವಹಿಸಬಲ್ಲುದು. ಭಾರತ ತನ್ನ ವೈವಿಧ್ಯತೆ ಮತ್ತು ವಿಶಾಲತೆಯಿಂದಾಗಿ ಸಮಸ್ಯೆಗಳನ್ನು ಪರಿಹರಿಸುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೊಂದಿದೆ. ಹಾಗೂ ಇಲ್ಲಿನ ಸಮಸ್ಯೆಗಳಿಗೆ ಒದಗಿಬಂದ ಪರಿಹಾರಗಳನ್ನು ಜಗತ್ತಿನಾದ್ಯಂತ ಪುನರಾವರ್ತಿಸಿ ಅನಿಷ್ಠಾನಗೊಳಿಸಬಹುದಾಗಿದೆ.

Tags : decentralisationempowermentsolar energySustainable Energy
Harish Hande

The author Harish Hande

Leave a Response